ಎಲುಗಟ್ಟು, ಅಕಶೇರುಕಗಳ: ಸ್ನಾಯುಗಳಿಗೆ ಆಸರೆಯಾಗಿ, ಸರಿ ಸುಮಾರು ದೃಢವಾಗಿ, ದೇಹದ ಒಳಗೆ ಇರುವ ಚೌಕಟ್ಟಿನ ಹೆಸರು ಎಲುಗಟ್ಟು. ಎಲುಬುಗಳ ಜೋಡಣೆ ಎಲುಗಟ್ಟು ಎಂದಿಟ್ಟುಕೊಂಡರೆ ಇದು ಕಶೇರುಕಗಳ ವಿಶಿಷ್ಟ ಗುಣವಾಗುತ್ತದೆ. ಕಾರಣ, ಎಲುಬುಗಳು ಆ ಪ್ರಾಣಿಗಳಿಗೆ ಮಾತ್ರ ಸೀಮಿತ. ಅಕಶೇರುಕಗಳಲ್ಲಿ ಎಲುಬುಗಳಿಲ್ಲ. ಆದರೆ ಎಲುಬುಗಳ ಕ್ರಿಯೆಯನ್ನು ಆಯಾ ಅಕಶೇರುಕಗಳ ಜೀವನಕ್ರಮಕ್ಕೆ ಸಹಾಯಕವಾಗಿ ನಿರ್ವಹಿಸಬಲ್ಲ ರಚನೆಯನ್ನು ಅಕಶೇರುಕಗಳ ಎಲುಗಟ್ಟು (ಸ್ಕೆಲಿಟನ್ ಆಫ್ ಇನ್ವರ್ಟಿಬ್ರೇಟ್ಸ್‌) ಎಂದು ಕರೆಯುವುದು ವಾಡಿಕೆ. ಶರೀರದ ಆಕಾರವನ್ನು ಕಾಪಾಡಿಕೊಳ್ಳಲು ನಾನಾ ರೀತಿಯ, ಅಸ್ಥಿಗೆ ಹೋಲಿಸಬಹುದಾದ ರಚನೆಗಳನ್ನು ಅಕಶೇರುಕಗಳು ಬೆಳೆಸಿಕೊಂಡಿರುವುದನ್ನು ಕಾಣಬಹುದು. ಬಹಳ ಅಕಶೇರುಕಗಳಲ್ಲಿ ಇಂಥ ಗಟ್ಟಿಯ ವಸ್ತುಗಳೂ ಇಲ್ಲ. ಇಂಥವು ನಮ್ಮ ಶರೀರದ ಆಕಾರವನ್ನು ಕಾಯ್ದಿಡಲು ಶರೀರದೊಳಗಿನ ನೀರನ್ನೇ ಆಶ್ರಯಿಸಬೇಕಾಗುತ್ತದೆ. ಜೀವಕೋಶಗಳಲ್ಲಿರುವ ನೀರು ಮತ್ತು ಇತರ ಭಾಗಗಳಲ್ಲಿರುವ ನೀರಿನ ಒತ್ತಡದಿಂದಾಗಿ ಆಕಾರ ಉಳಿದಿರುವುದು. ಕಂಬಳಿಹುಳು ಇದಕ್ಕೊಂದು ಉತ್ತಮ ನಿದರ್ಶನ. ಶರೀರದ್ರವಗಳ ಜೊತೆಗೆ ಮಾಂಸ ಖಂಡಗಳನ್ನು ಕೂಡ ನಾವು ಇಲ್ಲಿ ಗಣನೆಗೆ ತಂದುಕೊಳ್ಳಬೇಕು. ಈ ಪ್ರಾಣಿಗಳ ಚರ್ಮಕ್ಕೆ ಹೊಂದಿಕೊಂಡಂತೆ ಸ್ನಾಯುಗಳಿವೆ. ಇವುಗಳ ಕುಗ್ಗುವಿಕೆ ಮತ್ತು ಹಿಗ್ಗುವಿಕೆಯಿಂದ ಪ್ರಾಣಿಯ ಚಲನೆ ಸಾಧ್ಯವಾಗುತ್ತದೆ.

ಅಕಶೇರುಕಗಳಲ್ಲಿ ಅಸ್ಥಿಗೆ ಹೋಲಿಸಬಹುದಾದ ರಚನೆಗಳನ್ನು ಏಕಕೋಶಪ್ರಾಣಿ ಗಳಲ್ಲಿಯೂ ಕಾಣಬಹುದು. ಅಮೀಬದಲ್ಲಿ ಮಾತ್ರ ಇಂಥ ರಚನೆ ಇಲ್ಲ. ಆದರೆ ಇದೇ ವಂಶಕ್ಕೆ ಸೇರಿದ ಎಲ್ಫೀಡಿಯಾಗಳಲ್ಲಿ ಗಟ್ಟಿಮುಟ್ಟಾದ ಲವಣಮಿಶ್ರಿತ (ಕ್ಯಾಲ್ಸಿಯಂ ಕಾರ್ಬೊನೇಟ್) ಅಸ್ಥಿರಚನೆ ಇದೆ. ಮತ್ತೆ ಕೆಲವು ಏಕಕೋಶಜೀವಿಗಳಲ್ಲಿ ಮರುಳುಮಿಶ್ರಿತ ಅಸ್ಥಿರಚನೆಗಳಿವೆ. ಇಂಥ ರಚನೆಗಳು ಶರೀರವನ್ನು ರಕ್ಷಿಸುತ್ತವೆ. ಈ ಅಸ್ಥಿರಚನೆ ಪ್ರಾಣಿಯ ಶರೀರದ ಹೊರಭಾಗದಲ್ಲಾಗಬಹುದು ಅಥವಾ ಒಳಭಾಗದಲ್ಲಾಗಬಹುದು.
ಸ್ಪಂಜುಗಳಲ್ಲಿ ಕೂಡ ಗಟ್ಟಿಯಾಗಿರುವ ಲವಣಮಿಶ್ರಿತ ರಚನೆಗಳಿವೆ. ಇವು ಅತಿಸೂಕ್ಷ್ಮ ವಾಗಿದ್ದು ಮುಳ್ಳುಗಳನ್ನು ಹೋಲುತ್ತವೆ. ಇವು ಉತ್ಪಾದಿಸುವ ಈ ಒಳ ಅಸ್ಥಿ ಎಂಬ ಸ್ಪಾಂಜಿನ್ ಗಾಜಿನಂಥ ವಸ್ತುಗಳಿಂದಾಗುತ್ತದೆ. ಈ ರಚನೆಗಳು ಶರೀರಕ್ಕೆ ಆಸರೆಯನ್ನೊದಗಿ ಸುತ್ತವೆ. ಪ್ರತ್ಯೇಕವಾಗಿರುವ ಜೀವಕೋಶಗಳಿಂದಲೇ ಅಸ್ಥಿರಚನೆ ರೂಪುಗೊಳ್ಳುತ್ತದೆ.

ಕುಟುಕುಕಗಳಲ್ಲಿ ಹವಳದ ಹುಳುಗಳು ತಮ್ಮ ದೇಹಗಳಲ್ಲಿರುವ ಜೀವಕೋಶಗಳಿಂದ ಗಟ್ಟಿಮುಟ್ಟಾದ ಅಸ್ಥಿಯನ್ನು ಉತ್ಪತ್ತಿಸುತ್ತವೆ. ಇವುಗಳು ಹವಳದ ಗುಡ್ಡಗಳು ಮತ್ತು ಹವಳದ್ವೀಪಗಳನ್ನೇ ನಿರ್ಮಿಸುತ್ತವೆ. ಆಲ್ಸಿಯೋನಿಯಂನಲ್ಲಿ ಲವಣಮಿಶ್ರಿತ ದಾರಗಳು ಮತ್ತು ಮುಳ್ಳಿನಂಥ ರಚನೆಗಳನ್ನು ಒಳಗೊಂಡಿರುವ ಒಳ ಅಸ್ಥಿ ಇದೆ. ಹವಳದ ಗುಡ್ಡಗಳನ್ನು ನಿರ್ಮಿಸುವ ಪ್ರಾಣಿಗಳಲ್ಲಿ ಹೊರಚರ್ಮದ ಕೋಶಗಳಿಂದ ಅಸ್ಥಿ ಹುಟ್ಟುತ್ತದೆ. ಈ ಕೋಶಗಳಿಂದ ಉತ್ಪನ್ನವಾಗುವ ಬಟ್ಟಲಿನಂಥ ಅಸ್ಥಿರಚನೆಯೊಳಗೆ ಪ್ರಾಣಿ ಹುದುಗಿ ಕೊಳ್ಳುತ್ತದೆ. ಸಾವಿರಾರು ಪ್ರಾಣಿಗಳು ಒಟ್ಟುಗೂಡಿ ಸಂಘಜೀವನವನ್ನು ನಡೆಸುತ್ತಿರುವ ಭಾಗಗಳಲ್ಲಿ ಉತ್ಪತ್ತಿಯಾಗುವ ಅಸ್ಥಿರಚನೆಗಳಿಂದ ಹವಳದ ಗುಡ್ಡಗಳೇ ನಿರ್ಮಾಣವಾಗುತ್ತವೆ.

ಸಂದಿಪದಿಗಳಲ್ಲಿ ಹೊರ ಅಸ್ಥಿರಚನೆ ಬಹಳ ಚೆನ್ನಾಗಿ ಬೆಳೆದಿರುತ್ತದೆ. ಇವುಗಳ ಶರೀರದ ಮೇಲಿರುವ ಗಟ್ಟಿಯಾದ ಹೊದಿಕೆ ಖೈಟಿನ್ ಎಂಬ ವಸ್ತುವಿನಿಂದಾಗಿದ್ದು. ರಾಸಾಯನಿಕವಾಗಿ ನೈಟ್ರೊಜನ್ ಇರುವ ಶರ್ಕರಗಳ ಮತ್ತು ಇವುಗಳ ಜೊತೆಗೆ ಪ್ರೋಟೀನುಗಳು ಸೇರಿ ಖೈಟಿನ್ ಆಗುತ್ತದೆ. ಖೈಟಿನಿಂದ ಕ್ಯೂಟಿಕಲ್ ಎಂಬ ಹೊರಕವಚ ಉಂಟಾಗುತ್ತದೆ. ಇದು ಬಹಳ ಗಟ್ಟಿ.. ದುಂಬಿ ಮಿಡತೆ ಮುಂತಾದವುಗಳಲ್ಲಿ ಈ ರೀತಿಯ ಕ್ಯೂಟಿಕಲ್ ಹೊದಿಕೆಯನ್ನು ಕಾಣಬಹುದು. ಸಂದಿಪದಿಗಳ ಶರೀರದ ಖಂಡಗಳ ಮೇಲೆ ಈ ಕ್ಯೂಟಿಕಲ್ ವಸ್ತುವಿನ ತಟ್ಟೆಗಳು ಜೋಡಿಸಿಕೊಂಡಿರುವುದನ್ನು ಕಾಣುತ್ತೇವೆ. ಹೀಗೆ ಖಂಡಗಳ ಮೇಲಿರುವ ತಟ್ಟೆಗಳು ಒಂದರೊಡನೊಂದು ತೆಳುವಾದ ಪೊರೆಯ ಸಹಾಯದಿಂದ ಸಂಬಂಧ ಕಲ್ಪಿಸಿಕೊಂಡಿವೆ.

ಸೀಗಡಿ, ಏಡಿ, ನಳ್ಳಿ ಮುಂತಾದುವುಗಳ ಹೊರ ಅಸ್ಥಿಯಲ್ಲಿ ಕ್ಯೂಟಿಕಲ್ನೊಡನೆ ಸುಣ್ಣದ ಲವಣಗಳೂ ಸೇರಿಕೊಂಡಿದ್ದು ಅದು ಅತಿ ಗಟ್ಟಿಯಾಗುವಂತೆ ಮಾಡುತ್ತವೆ. ಇವುಗಳ ವದನಾಂಗಗಳು ಅತಿಗಟ್ಟಿಯಾದ ಸ್ಕ್ಲಿರೋಟಿನ್ ಎಂಬ ವಸ್ತುವಿನಿಂದಾಗಿವೆ. ಸಂದಿಪದಿಗಳ ಎಲುಗಟ್ಟು ಕೇವಲ ಶರೀರ ರಕ್ಷಣೆಯನ್ನೇ ಅಲ್ಲದೆ ಶರೀರದಲ್ಲಿರುವ ನೀರು ಹೊರ ಹೋಗದಂತೆ ರಕ್ಷಿಸುತ್ತದೆ. ಆದ್ದರಿಂದ ಈ ಕ್ಯೂಟಿಕಲ್ ಕವಚದ ಮೇಲೆ ಒಂದು ರೀತಿಯ ಮೇಣದಂಥ ವಸ್ತುವನ್ನು ಇವು ಉತ್ಪಾದಿಸಿಕೊಳ್ಳುತ್ತವೆ. ಚರ್ಮದಲ್ಲಿರುವ ಗ್ರಂಥಿಗಳು ಇದನ್ನು ಉತ್ಪಾದಿಸುವುವು.
ಮೃದ್ವಂಗಿಗಳ ವಂಶದಲ್ಲಿಯೂ ಅಸ್ಥಿರಚನೆಗಳು ಹೇರಳವಾಗಿವೆ, ಕಪ್ಪೆಚಿಪ್ಪಿನ ಹುಳು, ಶಂಖದ ಹುಳುಗಳು, ಕವಡೆ ಮುಂತಾದವುಗಳ ಶರೀರದ ಮೇಲೆ ಅತಿಗಟ್ಟಿಯಾದ ಸುಣ್ಣಮಿಶ್ರಿತ ಲವಣಗಳಿಂದಾದ ರಕ್ಷಾಕವಚಗಳಿವೆ. ಕವಚ ಈ ಪ್ರಾಣಿಗಳಿಗೆ ರಕ್ಷಣೆಯನ್ನೊ ದಗಿಸುತ್ತದೆ. ಪ್ರಾಣಿ ಸತ್ತಮೇಲೆಯೂ ಕವಚಗಳು ಬಹಳ ಕಾಲ ಉಳಿದಿರುತ್ತವೆ. ಈ ಹೊರ ಅಸ್ಥಿರಚನೆಗಳು ಚರ್ಮದ ಹೊದಿಕೆಯಾದ ಮ್ಯಾಂಟಲ್ ಎಂಬ ಅಂಗದಿಂದ ಹುಟ್ಟುತ್ತವೆ. ಇಲ್ಲಿ ಉತ್ಪತ್ತಿಯಾಗುವ ಲವಣ ವಸ್ತುಗಳು ಗಟ್ಟಿಯಾಗಿ ಹೊರ ಅಸ್ಥಿ ರಚನೆಯಾಗುತ್ತದೆ. ಕೆಲವು ಮೃದ್ವಂಗಿಗಳಲ್ಲಿ ಇಂಥ ಅಸ್ಥಿರಚನೆಗಳು ಶರೀರದ ಒಳಗೂ ಇದೆ. ಕಟಲ್ಮೀನು, ಲಾಲಿಗೊ ಮುಂತಾದ ಪ್ರಾಣಿಗಳಲ್ಲಿ ಅಸ್ಥಿರಚನೆಗಳು ಶರೀರದೊಳಕ್ಕೆ ಹುದುಗಿಕೊಂಡಿವೆ.

ಎಕಿನೋಡರ್ಮೇಟ ಅಥವಾ ಕಂಟಕಚರ್ಮಿಗಳಲ್ಲಿಯೂ ಅಸ್ಥಿರಚನೆಗಳಿವೆ. ಹೊರಚರ್ಮದ ತಳದಲ್ಲಿ ತಟ್ಟೆಗಳಂಥ ರಚನೆಗಳನ್ನು ಇವು ಉತ್ಪಾದಿಸಿಕೊಳ್ಳುತ್ತವೆ. ಆದ್ದರಿಂದ ಇವುಗಳ ಚರ್ಮ ಒರಟಾಗಿ ಗಟ್ಟಿಯಾಗಿರುತ್ತದೆ. ಕೆಲವು ಬಾರಿ ಈ ಅಸ್ಥಿರಚನೆಗಳು ಬಹಳ ಗಟ್ಟಿಯಾಗಿದ್ದು ಟೆಸ್ಟ್‌ ಅಥವಾ ಥೀಕಗಳೆಂಬ ಪಟ್ಟಿಗಳಂಥ ರಚನೆಗಳನ್ನು ಕೊಡುತ್ತವೆ. ಶರೀರದ ಮೇಲೆ ಮುಳ್ಳುಗಳಂಥ ಬೆಳೆವಣಿಗೆಗಳು ಕೂಡ ಉಂಟು. ಹೀಗಿದ್ದರೂ ಕೂಡ ಅಕಶೇರುಕಗಳಲ್ಲಿರುವ ಈ ಎಲುಗಟ್ಟನ್ನು ಕಶೇರುಕಗಳ ಎಲುಗಟ್ಟಿಗೆ ಯಾವ ವಿಧದಲ್ಲಿಯೂ ಹೋಲಿಸಲಾಗುವುದಿಲ್ಲ. ಕಶೇರುಕಗಳಲ್ಲಿ ಎಲುಗಟ್ಟು ಶರೀರಕ್ಕೆ ಆಸರೆ ಮತ್ತು ರಕ್ಷಣೆಯನ್ನೊದಗಿಸುವಂತೆಯೇ ಅಕಶೇರುಕಗಳಲ್ಲಿರುವ ಎಲುಗಟ್ಟು ಇವುಗಳ ಶರೀರ ರಕ್ಷಣೆಗೆ ಸಹಾಯಕವಾಗಿವೆ. ಈ ರೀತಿಯ ಎಲುಗಟ್ಟು ಒಂದೊಂದು ವಂಶದ ಅಕಶೇರುಕಗಳಲ್ಲಿ ಒಂದೊಂದು ರೀತಿಯಲ್ಲಿದೆ.	(ಎಲ್.ಎಸ್.ಜಿ.) 

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ